Oct 5, 2018

ಸ್ವಾತಿ ಮಳೆಹನಿಯಾಗಿ ಕಪ್ಪೆ ಚಿಪ್ಪನು ಸೇರಿ
ಮುತ್ತಾಗೊ ಆಸೆ ಇತ್ತು
ತಾವರೆ ಎಲೆಯಲ್ಲಿ ಹೊಳೆವ ಹನಿಯಾಗಿ ರವಿಯ 
ಬಿಂಬಿಸುವ ಆಸೆ ಇತ್ತು
ನೀರು ಹುಲ್ಲಿನ ಕೊನೆಯನ್ನು ಸೇರಿ
ತಂಪಾಗೋ ಆಸೆ ಇತ್ತು

ಸಾಧನೆಯ ಗೈದ ಮುಗ್ಧ ಕಣ್ಣ್ಣುಗಳಲ್ಲಿ
ಭಾಷ್ಪವಾಗುವ ಆಸೆ ಇತ್ತು
ಆಟವಾಡುತಲಿರುವ ಮುದ್ದು ಕಂದಮ್ಮಗಳ
ಜೋಲ್ಲಾಗೋ ಆಸೆ ಇತ್ತು
ಹರಿವ ನೀರನು ಸೇರಿ ಹರಿ ಪಾದ ತೊಳೆದು
ತೀರ್ಥವಾಗುವ ಆಸೆ ಇತ್ತು

ನನ್ನೊಳಗೆ ಸೇರಿ ನನ್ನನೇ ನಾನರಿತು ನಾನೇ
ನಾನಾಗೋ ಆಸೆ ಇತ್ತು
ನಿನ್ನೊಳಗೆ ಸೇರಿ ನಿನ್ನ ಭಾವವನರಿತು
ನೀನಾಗೋ ಆಸೆ ಇತ್ತು

ಆಗಿಹೆನು ನಾನು ಆಸೆಯೆಲ್ಲವ ಬಿಟ್ಟು
ಭೋರ್ಗರೆದ ಮಳೆಯ ನೀರಾಗಿ
ಕಡಲನ್ನು ಸೇರಿ ಬೀಸು ಗಾಳಿಗೆ ಸಿಲುಕಿ
ಅಪ್ಪಳಿಸುತಲಿರುವ ತೆರೆಯಾಗಿ
ಬಣ್ಣದ ಬೆಳಕಲಿ ಅಡಿದೊಡೇನು
ಬಣ್ಣದ ವೇಷವ ಹಾಕಿದೊಡೇನು
ಬಣ್ಣದ ಮಾತುಗಳಾಡಿದೊಡೇನು
ಬಣ್ಣದ ನೀರನು ಕುಡಿದೊಡೆ ಏನು

ರವಿ ಚಂದ್ರರಿಗೆ ಇಹುದೇ ಬಣ್ಣ
ನದಿ ಸಾಗರ ಹಿಡಿದಿಟ್ಟಿಹುದೆ ಬಣ್ಣ
ಮೋಡದ ಹಿಂದಡಗಿಹುದೆ ಬಣ್ಣ
ಆಕಾಶದಲಿ ತುಂಬಿಹುದೇ ಬಣ್ಣ

ಆಡಬೇಕೇನು ಬಣ್ಣದ ಮಾತು
ತೋರಬೇಕೇನು ಬಣ್ಣದ ರೂಪ
ಬಿಂಬಿಸಬೇಕೇ ಭಾವದಿ ಬಣ್ಣ
ಪಡೆಯಲು ಬೇಕೇ ಬದುಕಿಗೆ ಬಣ್ಣ
ಬದುಕಿನಂಗಡಿಯನ್ನು ತೆರೆದೆನಂದೊಂದು ದಿನ
ವ್ಯಾಪಾರ ನಿಯಮಗಳ ಅರಿವಿಲ್ಲದೆ

ಇಹುದೇನು ಸರಕುಗಳು ಬಾಳಿನಂಗಡಿಯಲ್ಲಿq
ಸುತ್ತಲಿನ ಗ್ರಾಹಕರ ಇಚ್ಛೆಗನುಸಾರ

ಒಬ್ಬೊಬ್ಬರಿಗೊಂದೊಂದು ಸರಕುಗಳ ಸೇರಿಸಿದೆ
ಬದುಕಿನುಗ್ರಾಣವದು ತುಂಬುತ್ತಲಿತ್ತು

ಇರುವರದೆಷ್ಟು ದಿನ ಗ್ರಾಹಕರು ನಿನ್ನ ಜೊತೆ
ಅವರ ಆಶಯವದು ನಿನಗೆ ಅರ್ಥ ವಾಗದಿರೆ

ಗ್ರಾಹಕರು ಅವರಿಷ್ಟ ಬಂದ ಕಡೆ ಸಾಗುವರು
ನಿನ್ನಂಗಡಿಯ ಸರಕವರಿಗಿಷ್ಟವಿಲ್ಲದಿರೆ

ಬದುಕೊಂದು ನಿನಗರ್ಥ ಆಗದಿಹ ವ್ಯಾಪಾರ
ದೇಹವೆಂಬೀ ಅಂಗಡಿಯೇ ಸರಕಿನುಗ್ರಾಣ
ಮನಸು ಬುದ್ಧಿಯ ಜೊತೆಗೆ ಮಾತು ನಡತೆಯೇ ಸರಕು
ಅಂಗಡಿಯ ಮಾಲಿಕನು ನಿನ್ನಾತ್ಮ ತಾನೇ

ದಿನವೊಂದು ಬಹುದಿಲ್ಲಿ ಅಂಗಡಿಯನೇ
ಕೊಳ್ಳೋ ಗ್ರಾಹಕನವನು
ಲೆಕ್ಕ ಹಾಕುವನೇನು ನಿನ್ನುಗ್ರಾಣದ ಸರಕನ್ನು
ಗ್ರಾಹಕರೇ ಇಲ್ಲದಿಹ ಬದುಕಿನಂಗಡಿಗೆ
ಕಲ್ಲಲ್ಲಿ ಕಾಣಿಸಿತು ಮೂರ್ತಿಯದು ಶಿಲ್ಪಿಗೆ
ಉಳಿಯ ಏಟನ್ನು ತಿಂದ ನೋವೆಲ್ಲ ಶಿಲೆಗೆ

ಮರದಲ್ಲಿ ಕಾಣಿಸಿತೇ ರಥವು ಆ ಬಡಗಿಗೆ
ಬೇರುಗಳ ಕಳಕೊಂಡ ನೋವೆಲ್ಲಾ ಮರಕೆ

ಸೊನ್ನೆಗಾರನಿಗೇನು ಕಾಣಿಸಿತು ಚಿನ್ನದಲಿ
ಹೊಡೆದನೇತಕೆ ಅದಕೆ ಅಗ್ನಿ ತಾಪದ ಜೊತೆಗೆ

ಮೂರ್ತಿಯಲಿ ಕಲ್ಲಿಲ್ಲ, ರಥದಲ್ಲಿ ಮರವಿಲ್ಲ
ಆಭರದಲಿ ಮಾತ್ರ ತುಂಬಿಹುದು ಚಿನ್ನ

ನೋವುಂಡ ಚಿನ್ನವದು ಕಳೆದಿಲ್ಲ ನೈಜತೆಯ
ಕೊಡಬಹುದು ಆನಂದ ಬಹು ರೂಪಿಯಾಗಿ
ಪಡೆವುದಾಕರ್ಷಣೆಯ ಚಿನ್ನದಾಭರಣವದು
ಮನ್ನಣೆಯ ಪಡೆಯುವುದು ಈ ಜಗದ ತುಂಬಾ

ಆಗದಿರು ನೀ ಶಿಲೆಯು, ಮೂರ್ತಿಯಾಗುವೆನೆಂದು
ಬರಿಯ ಮರವಾಗದಿರು
ಫಲವ ಕೊಡಬಹುದೆಂದು
ಇರು ನೀನು ದೇಶ ಕಾಲ ರೂಪದೊಳು
ಮನ್ನಣೆಯ ಪಡೆವ ಬಂಗಾರವಾಗಿ
ಹೋಮ ಕುಂಡದ ತೆರದಿ
ಕಾಲ ಕುಂಡವದೊಂದ
ಕಟ್ಟಿ ಬೆಳೆಸುತಲಿರುವೆ
ಸಂವತ್ಸರಗಳೆಂಬ ಇಟ್ಟಿಗೆಯ ಬಳಸಿ

ಬಾಳ ಯಜ್ಞವನಿಲ್ಲಿ ನಡೆಸುತ್ತಲಿಹೆ ನಾನು
ಕುಳಿತಿರುವ ಅಧ್ವರ್ಯು ಆ ಕಾಲ ದೇವ
ಸಲ್ಲಿಸಿಹೆನಿನ್ನೊಂದು ಆಹುತಿಯ ನಾನಿಂದು
ಕಳೆದು ಹೋಗುತ್ತಿರುವ ಆಯುವಿನ ಜೊತೆಗೆ

ಶೈಶವವು, ಬಾಲ್ಯವೂ ಯೌವನಾವಸ್ಥೆಯೂ
ಸೇರಿಹುದು ಯಜ್ಞಕ್ಕೆ ಆಹುತಿಯದಾಗಿ

ನಡೆಸಿರುವ ಕಾಯಕವು ಆಗಿಹುದು ದ್ರವ್ಯವು
ಬಾಳ ಯಜ್ಞಕ್ಕೆ ಹುತಾಶನನನ್ನು ಸೇರೆ

ಕೆಲವು ದ್ರವ್ಯಗಳಿಲ್ಲಿ ಪ್ರಜ್ವಲಿಸಿ ಉರಿಯುತಿರೆ
ಕೆಲವು ಎಬ್ಬಿಸಿತು ಧೂಮದಾ ಮೋಡ
ಕೆಲವು ಕಾರ್ಯಗಳು ಆಜ್ಯವಾಗಿರಲಿಲ್ಲಿ
ಕೆಲವು ಆಗಿಹವು ಚರು- ಪುರೋಡಾಶಗಳು

ಸಮಿಧೆಯಾಗುರಿಯುತಿಹ
ಇನ್ನು ಕೆಲ ಕಾರ್ಯಗಳು
ಬಂಧು ಬಾಂಧವರಿಂಗೆ
ಸುಖವ ತರಬಹುದೇ?

ಅರ್ಪಿಸಲೇ ಬೇಕು
ಶೇಷ ಭಾಗದ ಹವಿಸು
ಕಾಯುತಿಹ ಈಶ್ವರನ
ತೃಪ್ತಿಗಾಗಿ