Oct 5, 2018

ಹೋಮ ಕುಂಡದ ತೆರದಿ
ಕಾಲ ಕುಂಡವದೊಂದ
ಕಟ್ಟಿ ಬೆಳೆಸುತಲಿರುವೆ
ಸಂವತ್ಸರಗಳೆಂಬ ಇಟ್ಟಿಗೆಯ ಬಳಸಿ

ಬಾಳ ಯಜ್ಞವನಿಲ್ಲಿ ನಡೆಸುತ್ತಲಿಹೆ ನಾನು
ಕುಳಿತಿರುವ ಅಧ್ವರ್ಯು ಆ ಕಾಲ ದೇವ
ಸಲ್ಲಿಸಿಹೆನಿನ್ನೊಂದು ಆಹುತಿಯ ನಾನಿಂದು
ಕಳೆದು ಹೋಗುತ್ತಿರುವ ಆಯುವಿನ ಜೊತೆಗೆ

ಶೈಶವವು, ಬಾಲ್ಯವೂ ಯೌವನಾವಸ್ಥೆಯೂ
ಸೇರಿಹುದು ಯಜ್ಞಕ್ಕೆ ಆಹುತಿಯದಾಗಿ

ನಡೆಸಿರುವ ಕಾಯಕವು ಆಗಿಹುದು ದ್ರವ್ಯವು
ಬಾಳ ಯಜ್ಞಕ್ಕೆ ಹುತಾಶನನನ್ನು ಸೇರೆ

ಕೆಲವು ದ್ರವ್ಯಗಳಿಲ್ಲಿ ಪ್ರಜ್ವಲಿಸಿ ಉರಿಯುತಿರೆ
ಕೆಲವು ಎಬ್ಬಿಸಿತು ಧೂಮದಾ ಮೋಡ
ಕೆಲವು ಕಾರ್ಯಗಳು ಆಜ್ಯವಾಗಿರಲಿಲ್ಲಿ
ಕೆಲವು ಆಗಿಹವು ಚರು- ಪುರೋಡಾಶಗಳು

ಸಮಿಧೆಯಾಗುರಿಯುತಿಹ
ಇನ್ನು ಕೆಲ ಕಾರ್ಯಗಳು
ಬಂಧು ಬಾಂಧವರಿಂಗೆ
ಸುಖವ ತರಬಹುದೇ?

ಅರ್ಪಿಸಲೇ ಬೇಕು
ಶೇಷ ಭಾಗದ ಹವಿಸು
ಕಾಯುತಿಹ ಈಶ್ವರನ
ತೃಪ್ತಿಗಾಗಿ

No comments:

Post a Comment