Sep 28, 2010

‘ಅಪ್ಪ’ - ಕನಸುಗಳನ್ನು ಬಿತ್ತಿ, ಜಗವ ತೋರಿಸಿ, ಜೀವನ ಕಲಿಸಿದ ‘ಪ್ರಾಣ ಸ್ನೇಹಿತ’

ಅದು 1983 ನೇ ಇಸವಿಯ ಶನಿವಾರ. ದಿನಾಂಕ ಜುಲೈ 09. ಸತತವಾಗಿ ಸುರಿಯುತ್ತಿರುವ ಆಷಾಢ ಮಾಸದ ಮಳೆಗಾಲದ ದಿನಗಳವು. ಮನೆಯಲ್ಲಿ ತಿಂಗಳು ತುಂಬಿದ ಗರ್ಭಿಣಿ. ಬೆಳಗ್ಗೆ ಐದು ಘಂಟೆಗೇ ಆಕೆಗೆ ಹೆರಿಗೆ ನೋವು ಶುರುವಾದಾಗ ಮನೆಯಿಂದ ಸುಮಾರು ನಾಲ್ಕು ಮೈಲಿ ದೂರದಲ್ಲಿರುವ ಊರ ವೈದ್ಯರಲ್ಲಿಗೆ ನಡೆದುಕೊಂಡೇ ಆ ಚಳಿ ಮತ್ತು ಮಳೆಗೆ ನೆನೆದುಕೊಂಡು ಹೋಗಿ ಅವರನ್ನು ಕರೆದುಕೊಂಡು ಮನೆಗೆ ಬಂದಾಗ ಅದಾಗಲೇ ಸುಮಾರು ಬೆಳಗ್ಗಿನ ಜಾವ ಏಳು ಘಂಟೆ. ಅಷ್ಟರಲ್ಲಾಗಲೇ ಮಾಮೂಲಾಗಿ ಹೆರಿಗೆಯಾಗಿ, ಅಮ್ಮನ ಹೊಟ್ಟೆಯಿಂದ ನಾನು ಈ ಪ್ರಪಂಚಕ್ಕೆ ಬಂದಿರುವುದು ಗೊತ್ತಾಗಿ ಅದೆಷ್ಟು ಸಂತಸಪಟ್ಟಿದ್ದಿರಿ ಅಪ್ಪಾ ನೀವು ಅಂದು? ಮುಂಜಾನೆಯ ಕತ್ತಲೆಯ ಆಶಾಕಿರಣವಾಗಿ ಸೂರ್ಯ ಉದಯಿಸುತ್ತಿರಬೇಕಾದರೆ ನಿಮ್ಮ ಮನೆ-ಮನ ಎರಡರಲ್ಲೂ ಆಶಾಕಿರಣವಾಗಿ ನನ್ನನ್ನು ಕಂಡಿದ್ದಿರಾ ನೀವು? ಅದಕ್ಕೆಂದೇ ನನಗೆ ‘ರವೀ’ ಅಂತ ಹೆಸರಿಟ್ಟಿದ್ದು ನೀವು ಅಲ್ವಾ ಅಪ್ಪಾ? ಅದಾಗ ತಾನೇ ಸಹಿಸಲಸಾಧ್ಯ ವೇದನೆ ಕೊಟ್ಟು ಅಮ್ಮನ ಹೊಟ್ಟೆಯಿಂದ ಹೊರಗೆ ಬಂದು ಆಕೆಯ ಬಳಿ ಮಲಗಿದ್ದ ನನ್ನನ್ನು, ನಿಮಗೆ ‘ಅಪ್ಪ’ನ ಸ್ಥಾನಕ್ಕೆ ಭಡ್ತಿ ಕೊಟ್ಟ ನಿಮ್ಮ ಮಗನನ್ನು ನೋಡಿ ನಿಮ್ಮ ಕಂಗಳಲ್ಲಿ ಮೂಡಿದ ಆ ದಿವ್ಯ ಭಾವ ಯಾವುದಪ್ಪಾ? ಕೆಲವೇ ಕ್ಷಣಗಳ ಮುಂಚೆ ನಾನು ಈ ಭೂಮಿಗೆ ಬರಲು ಸಹಿಸಲಸಾಧ್ಯ ನೋವು ಕೊಟ್ಟಿದ್ದರೂ ನಿಮ್ಮನ್ನು ನೋಡಿ ಅಮ್ಮ ಮುಗುಳ್ನಕ್ಕಾಗ ನಿಮ್ಮ ಮನ ನಿರಾಳವಾಗಿತ್ತಾ ಅಪ್ಪಾ? ಕುಟುಂಬದ ಮುಂದಿನ ತಲೆಮಾರಿನ ಮೊದಲ ಮಗುವಾಗಿ ನಾನು ಈ ಧರೆಯಲ್ಲಿ ಜನಿಸಿದಾಗ ನೀವು, ಅಜ್ಜ, ಅಜ್ಜಿ, ಚಿಕ್ಕಮ್ಮ ಚಿಕ್ಕಪ್ಪಂದಿರು ತುಂಬಾ ಸಂಭ್ರಮಪಟ್ಟಿರಬಹುದು ಅಲ್ವಾ? ನಾನು ಹುಟ್ಟಿದ ಖುಷಿಯಲ್ಲಿ ಆಸುಪಾಸಿನ ಮನೆಯವರಿಗೆಲ್ಲಾ ಕೊಬ್ಬರಿ ಬೆಲ್ಲ ಅದೇ ದಿನ ಹಂಚಿ ಸಂತಸಪಟ್ಟಿದ್ರಾ ಅಪ್ಪಾ ನೀವು? ಸಂಬಂಧಿಕರೆಲ್ಲರಿಗೂ ನಾನು ಜನಿಸಿದ ಸಂತಸದ ವಿಚಾರವನ್ನು ಆದಷ್ಟು ಬೇಗ ತಿಳಿಸಿಬಿಡುವ ತವಕ ನಿಮ್ಮಲ್ಲಿತ್ತಾ ಅಪ್ಪಾ?

ಹೀಗೆ ನೂರಾರು ಪ್ರಶ್ನೆಗಳು, ಸಾವಿರಾರು ನೆನಪುಗಳು ನೆನಪಿನಾಳದ ಬುಟ್ಟಿಯಿಂದ ಒಂದೊಂದಾಗಿ ಹೊರಬರಲು ಪ್ರಯತ್ನಿಸುತ್ತಿವೆ. ನಾನು ಹುಟ್ಟಿ ಅದಾಗಲೇ ಇಪ್ಪತ್ತಾರು ಮಳೆಗಾಲಗಳು ಸದ್ದಿಲ್ಲದೇ ಕಳೆದು ಹೋಗಿವೆ. ಲೆಕ್ಕವಿಲ್ಲದಷ್ಟು ರಾತ್ರಿಗಳು ತೆಪ್ಪಗೆ ಚರಿತ್ರೆಯ ಪುಟಗಳಲ್ಲಿ ಮುದುಡಿ ಮಲಗಿವೆ. ಆದರೆ ಈ ನೆನಪೆಂಬ ಮಧುರ ನೆನಪುಗಳು ಮನಃಪಟಲದಲ್ಲಿ ನಿನ್ನೆ ಮೊನ್ನೆ ನಡೆದು ಹೋದ ಘಟನೆಗಳಂತೆ ಇನ್ನೂ ಕಾಣಿಸುತ್ತಿವೆ, ಹಾಗೇ ಸುಮ್ಮನೆ ಕಾಡುತ್ತಿವೆ.

ನಮ್ಮ ಮನೆ ಇರುವಂಥಹಾ ಹಳ್ಳಿಗಳಲ್ಲಿ ಆಗಿನ್ನೂ ಕರೇಂಟೆಂದರೆ ಏನೆಂದು ಗೊತ್ತಿಲ್ಲದಿದ್ದ ದಿನಗಳವು. ಆಗಿನ್ನೂ ಸೀಮೆ ಎಣ್ಣೆಯ ದೀಪಗಳೇ ಊರಿನ ಎಲ್ಲಾ ಮನೆಗಳಲ್ಲಿ ರಾತ್ರೆಯ ಕತ್ತಲಿನ ದಾರಿ ದೀಪಗಳಾಗಿದ್ದವು. ದಿನಗಳೆದಂತೆ ನಾನು ಬೆಳೆದು ದೊಡ್ಡವನಾಗತೊಡಗಿದೆ. ನಾನು ನಡೆದಾಡಿ ಸರಿಯಾಗಿ ಮಾತನಾಡಲು ಶುರುಮಾಡಿದಾಗ ಅಪ್ಪನೊಂದಿಗಿನ ಒಡನಾಟ ದಿನೇ ದಿನೇ ಜಾಸ್ತಿಯಾಗುತ್ತಾ ಬಂತು. ಬೆಳಗ್ಗೆ ಎದ್ದು ಮನೆಯ ತೋಟವನ್ನೊಮ್ಮೆ ಸುತ್ತಿ ಬರುವ ಹವ್ಯಾಸ ಅಪ್ಪ ಇಟ್ಟುಕೊಂಡಿದ್ದರು. ನನಗಾಗ ಮೂರು ವರ್ಷಗಳಿರಬಹುದೇನೋ. ನಾನು ಅಪ್ಪನ ಜೊತೆ ಬೆಳಗ್ಗೆ ಆರು ಘಂಟೆಗೇ ಎದ್ದು ತೋಟಕ್ಕೆ ಹೋಗುತ್ತಿದ್ದೆ. ಹಾಗೆ ತೋಟಕ್ಕೆ ಒಂದು ರೌಂಡ್ ಹಾಕಿ ಬರಲು. ಸಮತಟ್ಟಾದ ಜಾಗದಲ್ಲಿ ಅಪ್ಪನ ತೋರುಬೆರಳು ಹಿಡಿದುಕೊಂಡು ತೋಟದಲ್ಲಿ ನಡೆಯುತ್ತಿದ್ದೆ. ಕಡಿದಾದ, ಸಣ್ಣ ಚರಂಡಿ ಇರುವ ಜಾಗದಲ್ಲಿ ಅಪ್ಪ ನನ್ನನ್ನು ಎತ್ತಿಕೊಂಡು ಹೋಗುತ್ತಿದ್ದರು. ಮತ್ತೆ ಸಮತಟ್ಟಾದ ಜಾಗ ಬಂದಾಗ ನಾನು ಅಪ್ಪನ ತೋರು ಬೆರಳು ಹಿಡಿದು ನಡೆಯುತ್ತಿದ್ದೆ, ನಡೆಯುತ್ತಾ ಸಾಗುತ್ತಿದ್ದೆ, ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಅವರ ದಾಪುಗಾಲುಗಳಿಗೆ ನಾನು ಪೈಪೋಟಿ ನೀಡುತ್ತಿದ್ದೆ. ಆಗ ತೋಟದಲ್ಲಿ ಬೆಳೆಯುವ ಅಡಿಕೆ, ತೆಂಗು, ಒಳ್ಳೆ ಮೆಣಸು (ಪೆಪ್ಪೆರ್), ವಿವಿಧ ಬಾಳೇ ತಳಿಗಳು, ಕೊಕ್ಕೋ, ಜಂಬು ನೇರಳೆ, ಚಿಕ್ಕು, ಪೇರಳೆ ಗಿಡ... ಹೀಗೆ ಈ ಎಲ್ಲ ಸಸ್ಯ ಪ್ರಕಾರಗಳ ಪರಿಚಯ ಮಾಡಿಸುತ್ತಿದ್ದರು. ಮಳೆಗಾಲದ ದಿನಗಳಲ್ಲೂ ಒಂದು ಕೈಯಲ್ಲಿ ನನ್ನ ಪುಟ್ಟ ಕೊಡೆ ಹಿಡಿದುಕೊಂಡು ಇನ್ನೊಂದು ಕೈಯಿಂದ ಅಪ್ಪನ ತೋರು ಬೆರಳು ಹಿಡಿದುಕೊಂಡು ತೋಟವೆಲ್ಲಾ ಸುತ್ತಾಡುತ್ತಿದ್ದೆ. ಆಗ ಸಿಗುತ್ತಿದ್ದ ಆನಂದ ವರ್ಣನಾತೀತ.


ಬೆಳೆದು ಶಾಲೆಗೆ ಹೋಗುವಷ್ಟು ದೊಡ್ಡವನಾದಾಗ ಬೆಳಗ್ಗೆ ಬೇಗ ಎದ್ದು ತೋಟಕ್ಕೆ ಹೋಗಿ ಬಂದು ನಾನು ಅಪ್ಪ ಸ್ನಾನ ಮಾಡಿ, ದೇವರಿಗೆ ನಮಸ್ಕರಿಸಿ ಊರ ಮನೆಯ ಜಗಲಿಯಲ್ಲಿ ಕುಳಿತು ಚಹಾ ಹೀರುತ್ತಿದ್ದೆವು. ನಾನಾಗ ಅಪ್ಪನ ಮಡಿಲಲ್ಲಿ, ಅಪ್ಪನ ಬೆಚ್ಚಗಿನ ಬಾಹುಗಳಲ್ಲಿ ಬಂಧಿತನಾಗಿ ಅಮ್ಮ ಮಾಡಿ ಕೊಟ್ಟ ಹಾಲು ಹೀರುತ್ತಾ ಬೆಳಗಿನ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದೆ. ಪ್ರತಿ ದಿನ ಅಪ್ಪ ನಕ್ಷತ್ರಗಳ, ವಾರಗಳ, ತಿಥಿಗಳ, ತಿಂಗಳುಗಳ ಹೆಸರುಗಳನ್ನೂ ನನಗೆ ಕಲಿಸುತ್ತಿದ್ದರು. ಜೊತೆಗೆ ಶಾಲೆಯ ಪಾಠಗಳನ್ನೂ ನನಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕಲಿಸಿಕೊಡುತ್ತಿದ್ದರು. ಸಂಜೆ ವೇಳೆ ಸ್ನಾನ ಮಾಡಿ ಬಂದು ದೇವರ ಭಜನೆ ಮಾಡುವ ಪರಿಪಾಠವನ್ನೂ ನನ್ನಲ್ಲಿ ಚಿಕ್ಕಂದಿನಿಂದಲೇ ಬೆಳೆಸಿದ್ದರು. ದಿನಗಳೆದಂತೆ ಅಪ್ಪನ ಶೈಲಿಯನ್ನೇ ಅನುಕರಿಸುತ್ತಿದ್ದೆ. ‘ನಡೆಯುವ ಶೈಲಿಯಿಂದ ಹಿಡಿದು ಕೂದಲು ಬಾಚುವ ಶೈಲಿಯವರೆಗೆ ಎಲ್ಲಾ ಥೇಟ್ ಅಪ್ಪನ ಥರಾನೇ’ ಎಂದು ಅಮ್ಮ ಆಗಾಗ ಹೇಳುತ್ತಿದ್ದರು. ಹೀಗೆ ಬೆಳೆದು ದೊಡ್ಡವನಾದಾಗ ಅಪ್ಪನ ಪ್ರೀತಿಯ ಜೊತೆ ಗದರಿಕೆಯೂ ಸೇರಿಕೊಂಡಿತು. ನಾವು ತಪ್ಪು ಮಾಡಿದಾಗ ಅಪ್ಪ ಗದರಿಸಿ ಬುದ್ಧಿವಾದ ಹೇಳುತ್ತಿದ್ದರು. ಆಗೆಲ್ಲಾ ಅಮ್ಮನಿಗೆ ಹೋಲಿಸಿದರೆ ಅಪ್ಪ ಸ್ವಲ್ಪ ಒರಟ, ಮುಂಗೋಪಿ ಅಂತ ಅನ್ನಿಸಿದ್ದೂ ಉಂಟು.

ಏಳನೇ ತರಗಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ದೂರದ ಪೇಟೆಯಲ್ಲಿರುವ ಚಿಕ್ಕಪ್ಪನ ಮನೆಗೆ ಹೊರಟು ನಿಂತಾಗ ಅಪ್ಪನನ್ನು ಅಗಲುವ ಬೇಸರ ನನ್ನಲ್ಲಿ ಮನೆಮಾಡಿತ್ತು. ಅಪ್ಪನ ಪರಿಸ್ಥಿತಿಯೂ ಹಾಗೆ ಇತ್ತು. ಆದರೂ ತೋರ್ಪಡಿಸದೆ, ನನ್ನ ಕೈಗೆ ನೂರು ರೂಪಾಯಿಯ ನೋಟೊಂದನ್ನು ಕೊಟ್ಟು 'ಇಟ್ಟುಕೋ' ಎಂದು ಹೇಳಿ ತಲೆ ಸವರಿ, ಕಣ್ಣಂಚಲ್ಲಿ ನೀರಾಡುತ್ತಿದ್ದರೂ ನಗುಮೊಗದಿಂದ ನನ್ನನ್ನು ಕಳುಹಿಸಿಕೊಟ್ಟದ್ದನ್ನು ಮರೆಯಲು ಅಸಾಧ್ಯ. ಅಮ್ಮ ಹೇಳುತ್ತಿದ್ದರು, ನಾನು ಹೋದ ಒಂದೆರಡು ದಿನ ಅಪ್ಪ ತುಂಬಾ ಮಂಕಾಗಿದ್ದರಂತೆ. ನಾನೂ ಅಷ್ಟೇ, ಅಪ್ಪನನ್ನು ಬಿಟ್ಟಿರಲು ಆಗದೆ ಚಡಪಡಿಸುತ್ತಿದ್ದೆ. ಪ್ರತೀ ದಸರಾ ರಜೆ ಮತ್ತು ಬೇಸಿಗೆ ರಜೆ ಸಿಕ್ಕಿದ ಮಾರನೆ ದಿನವೇ ನಾನು ಮನೆಯಲ್ಲಿರುತ್ತಿದ್ದೆ. ನಾನು ಮನೆಗೆ ಹೊಗಿಲ್ಲದಿದ್ದಲ್ಲಿ ನನ್ನನ್ನು ಕರೆದುಕೊಂಡು ಹೋಗಲು ಅಪ್ಪನೇ ನಾನಿದ್ದಲ್ಲಿಗೆ ಬರುತ್ತಿದ್ದರು. ಮನೆಯಲ್ಲಿ ಫೋನ್ ಬಂದ ಮೇಲಂತೂ ವಾರಕ್ಕೊಮ್ಮೆ ಅಪ್ಪ ಅಮ್ಮ ಇಬ್ಬರೂ ತಪ್ಪದೇ ನನ್ನಲ್ಲಿ ಫೋನಿನಲ್ಲಿ ಮಾತಾಡುತ್ತಿದ್ದರು. ರಜೆಯಲ್ಲಿ ಊರಿನಲ್ಲಿ ಮನೆಯ ಅಂಗಳದಲ್ಲಿ ಪ್ರತಿ ದಿನ ಬೆಳಗ್ಗೆ ಸಂಜೆ ನಾನು, ಕಸಿನ್ಸ್, ಅಪ್ಪ, ಚಿಕ್ಕಪ್ಪ, ತಂಗಿಯಂದಿರು ಎಲ್ಲಾ ಸೇರಿ ಕ್ರಿಕೆಟ್ ಆಡುತ್ತಿದ್ದ ಸಂಭ್ರಮದ ದಿನಗಳು ಇನ್ನು ಜೀವಮಾನದಲ್ಲಿ ಬರಲಾರವೇನೋ.....
ನಾನೀಗ ಇಲ್ಲಿ ಒಳ್ಳೆಯ ಕೆಲಸದಲ್ಲಿದ್ದೀನಿ. ಆದರೆ ಅಪ್ಪ ನನಗೆ ಬುದ್ಧಿ ಬಂದಾಗ ಹೇಗಿದ್ದರೋ ಹಾಗೇ ಇದ್ದಾರೆ, ಅದೇ ಮಾತಿನ ಶೈಲಿ, ಅದೇ ಉಡುಗೆ-ತೊಡುಗೆ, ಅದೇ ಮುಗುಳ್ನಗೆ, ಅದೇ ಪ್ರೀತಿ, ಅದೇ ಮಮಕಾರ, ಅದೇ ಮೃದುಸ್ವಭಾವದ ಮಾತುಗಳು, ಬೇಜಾರಾದಾಗ ಮಾಡುವ ಅದೇ ಸಾಂತ್ವನದ ಶೈಲಿ, ಅದೇ ನಿಷ್ಕಲ್ಮಶ ನಗು, ಅದೇ ಪ್ರೌಢಿಮೆ, ಪ್ರತೀ ಬಾರಿ ಫೋನು ಮಾಡಿ ಮಾತಾಡಿದಾಗ 'ಏನಣ್ಣಯ್ಯಾ, ಹೇಗಿದ್ದೀಯಾ? ಎನ್ನುವ ಅದೇ ಆತ್ಮೀಯತೆಯ ಶೈಲಿ, ಇಲ್ಲಿಂದ ಊರಿನ ಮನೆಗೆ ಹೋಗಿ ಸೇರಿಕೊಂಡಾಗ 'ನೋಡಿ ಯಾರು ಬಂದ್ರು ಅಂತ, ನಮ್ಮ ರವಿಣ್ಣ ಬಂದಾ... ಬಾ ರವಿಣ್ಣಾ...’ ಎನ್ನುವ ನಲ್ಮೆಯ ಮಾತುಗಳು, ಬೆಳೆದು ದೊಡ್ದವರಾಗಿರುವ ನಮ್ಮೆಲ್ಲರನ್ನೂ (ನಾನು, ತಂಗಿಯಂದಿರು, ಕಸಿನ್ಸ್ ಹೀಗೆ ಎಲ್ಲರನ್ನೂ) ಪ್ರೀತಿಯಿಂದ ನಗು ನಗುತ್ತಾ ಮಾತನಾಡಿಸುವ ಅವರ ಅಕ್ಕರೆ... ಈಗೀಗ ಕೊಂಚ ಕೂದಲು ಹಣ್ಣಾಗಿದೆ ಅಂತ ಬಿಟ್ಟರೆ ಅಪ್ಪ ಇನ್ನೂ ಮೂವತ್ತರ ಹರೆಯದ ಯುವಕ! ಆಗಿನಿಂದ ಈಗಕ್ಕೆ ವ್ಯತ್ಯಾಸ ನೋಡಿದರೆ ಅಜ-ಗಜಾಂತರ...!! ಆಗಿನ್ನೂ ಹುಟ್ಟಿರದ ನನ್ನ ಇಬ್ಬರು ತಂಗಿಯಂದಿರಿಗೂ ಮದುವೆಯಾಗಿದೆ, ನನ್ನ ನಂತರ ಹುಟ್ಟಿದ ಕಸಿನ್ಸ್ ಕೆಲವರು ಕಲಿಯುತ್ತಿದ್ದಾರೆ, ಇನ್ನು ಕೆಲವರು ಅದಾಗಲೇ ಬೇರೆ ಬೇರೆ ಊರುಗಳಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ, ಊರಿನ ಮನೆ ಅದಾಗಲೇ ಎರಡು ಬಾರಿ ರಿಪೇರಿಯಾಗಿದೆ, ಊರ ತೋಟದ ಅಡಿಕೆ ಮರಗಳು ಲೆಕ್ಕವಿಲ್ಲದಷ್ಟು ಫಲ ಕೊಟ್ಟಿವೆ, ಗದ್ದೆ ಬದಿಯ ತೆಂಗಿನ ಮರಗಳಿಂದ ಅದೆಷ್ಟೋ ತೆಂಗಿನಕಾಯಿಗಳು ಉದುರಿವೆ, ಮನೆಯ ಕೊಟ್ಟಿಗೆಯಲ್ಲಿ ಅದೆಷ್ಟೋ ದನ ಕರುಗಳು ಬಂದು ಹೋಗಿವೆ, ಅಂಗಳದ ಕೊನೆಯ ಹಲಸಿನ ಮರ ಲೆಕ್ಕವಿಲ್ಲದಷ್ಟು ಸಿಹಿಯಾದ ಹಣ್ಣುಗಳನ್ನು ಕೊಟ್ಟಿದೆ, ತೋಟದಾಚೆಗಿನ ಗುಡ್ಡೆ ಈಗ ‘ಅಡಿಕೆ ತೋಟ’ವಾಗಿ ಮಾರ್ಪಟ್ಟಿದೆ, ಮನೆಯೆದುರಿನ ಅಂಗಳದ ತುಳಸಿಕಟ್ಟೆಯಲ್ಲಿನ ಗಿಡಗಳನ್ನು ಲೆಕ್ಕವಿಲ್ಲದಷ್ಟು ಸಾರಿ ಬದಲಾಯಿಸಲಾಗಿದೆ, ಮನೆಯ ಅಂಗಳದಲ್ಲಿ ಕಳೆದ 26 ವರ್ಷಗಳ ಮಳೆಗಾಲದ ನೀರು ಹರಿದು ಹೋಗಿದೆ.... ನಮಗೆಲ್ಲಾ ಇಷ್ಟು ಒಳ್ಳೆಯ ಶಿಕ್ಷಣ ನೀಡಿದ, ಮನೆಯವರೆಲ್ಲರ ಸುಖ-ಸಂತೋಷಕಾಗಿ ಶ್ರಮಿಸಿದ, ನಮಗೆಲ್ಲಾ ಮಾರ್ಗದರ್ಶಕರಾಗಿ ಕೆಲಸ ಮಾಡಿದ ನನ್ನ ನೆಚ್ಚಿನ ಅಪ್ಪಾ ನಿಮ್ಮ ಪಾದಾರವಿಂದಗಳಿಗೆ ಪ್ರೀತಿಪೂರ್ವಕ ಸಾಷ್ಟಾಂಗ ಪ್ರಣಾಮಗಳು.

ನನ್ನ ಪಾಲಿಗೆ ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಾಣಲು ಕಲಿಸಿದವರು, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಟ್ಟವರು, ಅಪ್ಪ ಎಂದರೆ ಒಂದು ಸಣ್ಣ ಗದರಿಕೆ, ಅಪ್ಪ ಎಂದರೆ ಆ ಬಡತನದ ದಿನಗಳಲ್ಲೂ ನಮ್ಮ ಪಾಲಿನ ಏಟಿಎಂ ಆಗಿದ್ದವರು, ಅಪ್ಪ ಎಂದರೆ ಬದುಕಿನ ಅಚ್ಚರಿ, ಅಪ್ಪ ಎಂದರೆ ಜೀವನದ ಆಶಾಕಿರಣ, ಅಪ್ಪ ಎಂದರೆ ಪ್ರಾಣ ಸ್ನೇಹಿತ, ಅಪ್ಪ ಎಂದರೆ ನನ್ನ ಪಾಲಿನ ರೋಲ್ ಮಾಡೆಲ್, ಅಪ್ಪ ಎಂದರೆ ಸಂಭ್ರಮ, ಅಪ್ಪ ಎಂದರೆ ಕಣ್ಣಿಗೆ ಕಾಣುವ ದೇವರು, ಅಪ್ಪ ಎಂದರೆ ಆತ್ಮಸ್ಥೈರ್ಯ, ಅಪ್ಪ ಎಂದರೆ ಇನ್ನೂ ಏನೇನೋ... ಅಪ್ಪಾ ಎಂದರೆ ಎಲ್ಲವೂ....!!!

ನನಗೆ ಇಷ್ಟು ಒಳ್ಳೆಯ ಬದುಕು ರೂಪಿಸಿಕೊಟ್ಟ ನಿಮಗೆ 'ಅಪ್ಪಂದಿರ ದಿನ'ದ ಶುಭಾಶಯಗಳು ಅಪ್ಪಾ. ನೀವು ನೂರ್ಕಾಲ ಸುಖವಾಗಿ, ಸಂತಸದಿಂದ, ಆರೋಗ್ಯಯುತ ಬಾಳನ್ನು ಬಾಳುವಂತಾಗಲಿ. ಜೀವನದ ಅನಿವಾರ್ಯತೆಯಿಂದಾಗಿ ಕಳೆದ ಹದಿನೈದು ವರ್ಷಗಳಿಂದ ನಿಮ್ಮಿಂದ ದೈಹಿಕವಾಗಿ ದೂರವಿದ್ದೇನಾದರೂ ಮಾನಸಿಕವಾಗಿ ಮೊದಲಿನಷ್ಟೇ ಹತ್ತಿರವಿದ್ದೇನಪ್ಪಾ. ನಿಮ್ಮ ಮತ್ತು ಅಮ್ಮನ ಆರೋಗ್ಯದ ಕಡೆ ಗಮನವಿರಲಿ. Appa, your guiding hand on my shoulder and blessing hand on my head will remain with me forever. Always be happy, live healthy and long life ಅಷ್ಟೇ!!! ನಾನು ನಿಮ್ಮ ಮನಸ್ಸಿಗೆ ನೋವು ಕೊಟ್ಟಿದ್ದರೆ, ನನ್ನಿಂದ ನಿಮಗೆ ಬೇಸರವಾಗಿದ್ದರೆ, ನಾನು ನಿಮ್ಮಿಷ್ಟದ ವಿರುದ್ಧ ನಡೆದುಕೊಂಡಿದ್ದರೆ ನನ್ನ ಕ್ಷಮಿಸಿಬಿಡಿ ಅಪ್ಪಾ... ಪ್ಲೀಸ್...

ಮಿಸ್ ಯೂ ಅಪ್ಪಾ...
ಇಂತಿ ನಿಮ್ಮ ಪ್ರೀತಿಯ ಮಗ ಹಾಗೂ 'ಪ್ರಾಣ ಸ್ನೇಹಿತ',
* ರವೀ *

('ವಿಶ್ವ ಅಪ್ಪಂದಿರ ದಿನಾಚರಣೆ'ಯಂದು ನನ್ನ ಪ್ರೀತಿಯ ತಂದೆಯವರಿಗೆ ಬರೆದು ಅರ್ಪಿಸಿದ ಲೇಖನವಿದು)